ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅಟಲ್ ಸೇವಾ ಕೇಂದ್ರದಲ್ಲಿ ಸಹಾಯ ಕೇಂದ್ರ – ಶಾಸಕ ಕಾಮತ್

ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅಟಲ್ ಸೇವಾ ಕೇಂದ್ರದಲ್ಲಿ ಸಹಾಯ ಕೇಂದ್ರ – ಶಾಸಕ ಕಾಮತ್

ಆಟೋ,ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರಕಾರ ನೀಡುವ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಖಾಸಗಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ವಿವಿಧ ಕಾರ್ಮಿಕ ವರ್ಗಗಳಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಘೋಷಿಸಿರುವ ಪ್ಯಾಕೇಜಿನ ಫಲಾನುಭವಿಗಳಿಗೆ ಸೇವಾ ಸಿಂಧು ಅಪ್ಲಿಕೇಶನ್ ಮೂಲಕ ಸಹಾಯ ಧನ ನೀಡಲಾಗುತ್ತಿದೆ. ಹಾಗೆಯೇ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ರಾಜ್ಯ ಸರಕಾರ ನೀಡುವ 5000 ರೂಪಾಯಿ ಸಹಾಯಧನಕ್ಕೆ ತಮ್ಮ ಮೊಬೈಲ್ ಅಥವ ಕಂಪ್ಯೂಟರ್ ಮೂಲಕ ಸೇವಾ ಸಿಂಧು ಅಪ್ಲಿಕೇಶನ್ ಬಳಸಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ದುಡಿಯುವ ಎಲ್ಲಾ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಬೇಕು. ಹಾಗೂ ಮೊಬೈಲ್ ಅಥವ ಕಂಪ್ಯೂಟರ್ ಬಳಕೆ ತಿಳಿಯದಿದ್ದವರಿಗಾಗಿ ಕೊಡಿಯಾಲ್`ಬೈಲ್ ನಲ್ಲಿರುವ ನನ್ನ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಇಲ್ಲಿಗೆ ತಮ್ಮ ಆಧಾರ್ ಕಾರ್ಡ್, ವಾಹನ ಪರವಾನಗಿ, ವಾಹನದ ದಾಖಲೆ, ಬ್ಯಾಡ್ಜ್, ಬ್ಯಾಂಕ್ ಖಾತೆಯ ವಿವರ ಸಹಿತ ಎಲ್ಲಾ ದಾಖಲೆಗಳೊಂದಿಗೆ ಬಂದರೆ ನಮ್ಮ ಕಚೇರಿಯ ಸಿಬ್ಬಂದಿಗಳು ಅರ್ಜಿ ಸಲ್ಲಿಸುತ್ತಾರೆ.ವಿಶೇಷವಾಗಿ ಗಮನಿಸಬೇಕಾದ ವಿಚಾರವೆಂದರೆ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಹಾಗಿಲ್ಲದಿದ್ದರೆ ನಿಮಗೆ ಈ ಸೌಲಭ್ಯ ಪಡೆಯಲು ಕಷ್ಟ ಸಾಧ್ಯವಾಗಬಹುದು. ಹಾಗಾಗಿ ತಕ್ಷಣವೇ ತಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಬೇಕು. ಹಾಗಾಗಿ ಮಂಗಳೂರಿನ ಎಲ್ಲಾ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಕಚೇರಿಗೆ ಬರುವ ಸಂದರ್ಭದಲ್ಲಿ ತಮ್ಮ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಳೀಯ ಮನಪಾ ಸದಸ್ಯೆ ಲೀಲಾವತಿ ಪ್ರಕಾಶ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅದ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ.ಸುರೇಂದ್ರ, ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ ಹಾಗೂ ವಿವಿಧ ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಟ್ಯಾಕ್ಸಿ ಚಾಲಕರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.

Latest News