ಒಳ ಒಪ್ಪಂದ ಮಾಡಿಕೊಂಡವರು ಯಾರೆಂದು ಮಾಜಿ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಲಿ – ಶಾಸಕ ಕಾಮತ್

ಒಳ ಒಪ್ಪಂದ ಮಾಡಿಕೊಂಡವರು ಯಾರೆಂದು ಮಾಜಿ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಲಿ – ಶಾಸಕ ಕಾಮತ್

September 8: ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನ ಮಂತ್ರಿ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈಗಳು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು ಎಂದಿದ್ದ ಮಾಜಿ ಸಚಿವ ರಮಾನಾಥ್ ರೈ ಅವರ‌ ಹೇಳಿಕೆಗೆ ಶಾಸಕ ವೇದವ್ಯಾಸ್ ಕಾಮತ್ ಅವರು ತಿರುಗೇಟು ನೀಡಿದ್ದು, ರಾಜಕಾರಣ ಮಾಡುವುದಕ್ಕೂ ಮಿತಿಯಿದೆ‌‌‌ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ತಾಯಿಯನ್ನು ರಾಜಕೀಯ ಹೇಳಿಕೆಗೆ ಬಳಸಿಕೊಳ್ಳಬಾರದು. ರೈಗಳು ಹಿರಿಯರು, ರಾಜಕೀಯದಲ್ಲಿ ಪಳಗಿದವರು. ಅವರ ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ಒಳ ಒಪ್ಪಂದ ಮಾಡಿಕೊಂಡವರು ಯಾರೆಂದು ಭಾರತ ನೋಡುತ್ತಿದೆ. ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನೇ ಸಾಕ್ಷಿಯಾಗಿರಿಸಿಕೊಂಡು ಪಾಕಿಸ್ಥಾನವು ವಿಶ್ವ ಸಂಸ್ಥೆಯಲ್ಲಿ ವಾದಿಸಿತ್ತು ಎನ್ನುವ ಸತ್ಯ ರಮನಾಥ ರೈಗಳಿಗೆ ತಿಳಿದಿರಬೇಕು ಎಂದಿದ್ದಾರೆ.
ಒಪ್ಪಂದಗಳೆಂದರೆ ಏನು ಎಂಬುದನ್ನು ಕಾಂಗ್ರೆಸಿನ ಅನೇಕ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ‌ಈ ಹಿಂದೆ ಮಣಿಶಂಕರ್ ಅಯ್ಯರ್ ಅವರು ಕೂಡ ಮೋದಿಯನ್ನು ಸೋಲಿಸಲು ಪಾಕಿಸ್ಥಾನದ ನೆರವು ಕೋರಿದ್ದರು.‌ ಆ ಕುರಿತು ರಮನಾಥ ರೈಗಳು ಸ್ಪಷ್ಟೀಕರಣ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Latest News