ಕ್ಷೇತ್ರದ ಅಭಿವೃದ್ಧಿಗೆ ಸಿಎಂ 25 ಕೋಟಿ ಅನುದಾನ ಬಿಡುಗಡೆ: ಶಾಸಕ ಕಾಮತ್

ಕ್ಷೇತ್ರದ ಅಭಿವೃದ್ಧಿಗೆ ಸಿಎಂ 25 ಕೋಟಿ ಅನುದಾನ ಬಿಡುಗಡೆ: ಶಾಸಕ ಕಾಮತ್

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಮನವಿಯ ಮೇರೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 25 ಕೋಟಿ ಅನುದಾನ ಬಿಡುಗಡೆಗೊಳಿಸಲು ಸರಕಾರ ಸಮ್ಮತಿಸಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖಾ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗಾಗಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹತ್ತು ಕೋಟಿ ಅನುದಾನವನ್ನು ಅನುಮೋದಿಸಿದ್ದಾರೆ. ಹತ್ತು ಕೋಟಿಯ ಮೊತ್ತಕ್ಕೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆಯು ಸಹಮತಿಸಿದೆ.
ಅದೇ ಪ್ರಕಾರ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗಾಗಿ ಎಸ್.ಎಫ್.ಸಿ (ವಿಶೇಷ ಅನುದಾನ) ಬಿಡುಗಡೆ ಮಾಡುವಂತೆ ಶಾಸಕ ಕಾಮತ್ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದರು. ಅದರಂತೆ ಮಾನ್ಯ ಮುಖ್ಯಮಂತ್ರಿಯವರು ತಮ್ಮ ವಿವೇಚನಾ ನಿಧಿಯ ಅಡಿಯಲ್ಲಿ ಎಸ್ ಎಫ್ ಸಿ ವಿಶೇಷ ಅನುದಾನವಾಗಿ 15 ಕೋಟಿ ರೂಪಾಯಿಯನ್ನು ಅನುಮೋದಿಸಿದ್ದಾರೆ. ಹೀಗೆ ಒಟ್ಟು 25 ಕೋಟಿ ರೂಪಾಯಿಗಳನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರದ ಮೂಲಕ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಿಡುಗಡೆಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಕಾಮತ್ ಅವರು, ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನನ್ನ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಮನವಿ ಸಲ್ಲಿಸಿದ್ದೆ.ನನ್ನ ಮನವಿಯ ಮೇರೆಗೆ ಅನುದಾನ ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದರು.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಅನೇಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಈ ಹಿಂದೆಯೇ ರೂಪಿಸಿದ್ದೆ.ಆದರೆ ಅನುದಾನದ ಕೊರತೆಯಿಂದ ಕಳೆದ ಒಂದು ವರ್ಷದಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಈಗ ಅಭಿವೃದ್ಧಿಯ ಹೊಸ‌ ಶಖೆ ಪ್ರಾರಂಭವಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ಕನಸಿದೆ.ಅದನ್ನು ಸಾಕಾರಗೊಳಿಸಲು ಸರಕಾರದಿಂದ ಮತ್ತಷ್ಟು ಅನುದಾನ ತರುವಲ್ಲಿ ನಿರಂತರವಾಗಿ ಶ್ರಮಿಸುವುದಾಗಿ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

Latest News