ತುಳು ರಂಗಭೂಮಿಗೆ ಬೀಸಿದ ಬದಲಾವಣೆಯ ಬಿರುಗಾಳಿ – ಲಯನ್ ಕಿಶೋರ್ ಡಿ ಶೆಟ್ಟಿಯವರ ಶ್ರೀಲಲಿತೆ ತಂಡದ ” ಗರುಡ ಪಂಚೆಮಿ “
ತುಳು ರಂಗಭೂಮಿಗೆ ಬೀಸಿದ ಬದಲಾವಣೆಯ ಬಿರುಗಾಳಿ – ಲಯನ್ ಕಿಶೋರ್ ಡಿ ಶೆಟ್ಟಿಯವರ ಶ್ರೀಲಲಿತೆ ತಂಡದ ” ಗರುಡ ಪಂಚೆಮಿ “
ಪುರಭವನದಲ್ಲಿ ೨೮/೧೧/೨೨ ರಂದು ನಡೆದ
” ಗರುಡ ಪಂಚೆಮಿ ” ನಾಟಕವನ್ನು ನೋಡಿದ ಬಳಿಕ ಕೆಲವೊಂದು ವಿಚಾರಗಳನ್ನು ಹೇಳಲೇಬೇಕೆಂದು ಈ ಲೇಖನವನ್ನು ಬರೆಯುತ್ತಿದ್ದೇನೆ . ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಗೆ ಮೊದಲೇ ಸಾಕಷ್ಟು ಸದ್ದು ಮಾಡಿದ ಈ ನಾಟಕದ ಬಗ್ಗೆ ಬಹಳಷ್ಟು ನಿರೀಕ್ಷೆ – ಕುತೂಹಲ ಮೂಡಿತ್ತು . “ಪೊಸ ದೇಖಿದ ತುಳು ನಾಟಕ ” ಎಂಬ ಘೋಷ ವಾಕ್ಯವನ್ನು ಪ್ರಕಟಿಸಿದ ” ಶ್ರೀಲಲಿತೆ ” ತಂಡ ತನ್ನ ಮಾತನ್ನು ನೂರು ಪ್ರತಿಶತ ಉಳಿಸಿಕೊಂಡಿದೆ . ಖಂಡಿತವಾಗಿಯೂ ಇದು ಒಂದು ಹೊಸತನದ ಪ್ರಯೋಗವೇ ಸರಿ . ತುಳು ರಂಗ ಭೂಮಿಯಲ್ಲಿ ಈವರೆಗೆ ಕಂಡು ಕೇಳರಿಯದ ಅದ್ಭುತ ದೃಶ್ಯ ಪ್ರಯೋಗ . ನಾಟಕ ಪ್ರಾರಂಭವಾಗುವ ತೆರೆದುಕೊಂಡ ದೃಶ್ಯ ಒಂದು ಅದ್ಭುತವಾದ ಅರಮನೆ . ಹಿನ್ನೆಲೆ ಸಂಗೀತದೊಂದಿಗೆ ವಿಶಿಷ್ಟವಾದ ಬೆಳಕಿನ ಸಂಯೋಜನೆಯಲ್ಲಿ ದೃಶ್ಯ ತೆರೆದುಕೊಂಡಾಗ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕುಳಿತ ಅನುಭವ . ಬಣ್ಣ ಬಣ್ಣದ ಬೆಳಕು ….. ವೇಷಭೂಷಣ ಅತ್ಯಾಧುನಿಕ ಧ್ವನಿ ತಂತ್ರಜ್ಞಾನವನ್ನು ಬಳಸಿಕೊಂಡ ರೀತಿ ….. ಯಾವುದೋ ಭ್ರಮಾ ಲೋಕಕ್ಕೆ ಕೊಂಡೊಯ್ಯಿತು . ರಂಗದಲ್ಲಿ ಬೆಳಕು ಆರಿ ಕತ್ತಲಾದಾಗಲಷ್ಟೇ ತಿಳಿದಿದ್ದು …. ದೃಶ್ಯ ಮುಗಿಯಿತು ಎಂದು . ಮುಂದಿನದ್ದು ವಿಸ್ಮಯ . !! ಕ್ಷಣಾರ್ಧದಲ್ಲಿ ರಂಗದಲ್ಲಿ ಬೆಳಕು ಮೂಡಿದಾಗ ಕಂಡದ್ದು ……ಭಯಾನಕವಾದ ಕಾಡು !!! ಬಣ್ಣ ಬಣ್ಣದ ಅರಮನೆ ಕಗ್ಗತ್ತಲ ಕಾಡಾಗಿ ಕ್ಷಣಾರ್ಧದಲ್ಲಿ ಮಾರ್ಪಾಡಾಗಿದ್ದು ಅದ್ಭುತವಾದ ರಂಗ ತಂತ್ರಕ್ಕೆ ಸಾಕ್ಷಿ . ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ , ನಾವು ಇದುವರೆಗೆ ಎಲ್ಲಾ ನಾಟಕಗಳಲ್ಲಿ ದೃಶ್ಯಗಳ ಬದಲಾವಣೆ ( ಸೆಟ್ಟಿಂಗ್ ಸೇರಿ ) ಗಳನ್ನು ನೋಡುತ್ತಿದ್ದೆವು . ಆದರೆ ಇಲ್ಲಿ ಸಂಪೂರ್ಣ ” ರಂಗ ವೇದಿಕೆಯೇ ” ಬದಲಾಗಿತ್ತು . ವೇದಿಕೆಯಲ್ಲಿರುವ ಸೈಡ್ ವಿಂಗ್ಸ್ ಗಳು ಕೂಡ ಬದಲಾಗಿದ್ದು ಮಾಯಾ ಜಾಲವಾಗಿತ್ತು . ಅದು ಹೇಗೆ ಎಂಬುವುದು ಅರ್ಥವಾಗುತ್ತಿಲ್ಲ . ಏನೇ ಇದ್ದರೂ ಇಂತಹ ಅದ್ಭುತ ರಂಗ ತಂತ್ರವನ್ನು ಪ್ರಪ್ರಥಮ ಬಾರಿಗೆ ತುಳು ರಂಗಭೂಮಿಗೆ ಪರಿಚಯಿಸಿದ ” ಲಯನ್ ಕಿಶೋರ್ ಡಿ ಶೆಟ್ಟಿ ಯವರು ” ಅಭಿನಂದನಾರ್ಹರು .
ಮುಂದಿನದೆಲ್ಲಾ ಒಂದು ಅವರ್ಣನೀಯ ಅನುಭವ . ಎರಡು ಘಂಟೆ ೨೫ ನಿಮಿಷಗಳು ಕಳೆದದ್ದೇ ತಿಳಿಯಲಿಲ್ಲ . ಕಣ್ಣು ಮುಚ್ಚಿ ತೆರೆಯುವುದರೊಳಗೆ ಬದಲಾಗುವ ಚಿತ್ರ ವಿಚಿತ್ರ ದೃಶ್ಯಗಳು , ರಂಗ ಮಧ್ಯದಲ್ಲಿ ಮುದುಕಿಯೂ ಮಾಯವಾಗಿ ಪ್ರೇತವಾಗುವುದು ಅಂತರಿಕ್ಷದಿಂದ ಸೃಷ್ಟಿಯಾಗುವ ವಸ್ತುಗಳು ರಂಗದಲ್ಲಿ ಮೋಹಿನಿ …ಪ್ರೇತಗಳ ಓಡಾಟ , ಪ್ರತ್ಯಕ್ಷ – ಮಾಯ . ಒಟ್ಟಾರೆಯಾಗಿ ಇಡೀ ನಾಟಕವು 3D ಚಲನಚಿತ್ರವನ್ನು ವೀಕ್ಷಿಸಿದ ಅನುಭವವಾಗಿತ್ತು .
ಶ್ರೀಲಲಿತೆ ತಂಡದ ಎಲ್ಲಾ ಕಲಾವಿದರು ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ . ಹಿರಿಯ ರಂಗ ಕಲಾವಿದರಾದ ಸರೋಜಿನಿ ಶೆಟ್ಟಿ ಮತ್ತು ಜೀವನ್ ಉಳ್ಳಾಲ್ರವರ ಅಭಿನಯ ಮನೋಜ್ಞವಾಗಿತ್ತು . ಅದರಲ್ಲೂ ಜೀವನ್ ಉಳ್ಳಾಲ ರವರ “” ಮಹಾ ಮಾಂತ್ರಿಕ ಜಾತವೇದ “” ನಾಗಿ ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಸಂಭಾಷಣೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ . ಅವರ ” ಶಿವನೇ …ಶಿವ .. ” ಡೈಲಾಗ್ ಶೀಘ್ರದಲ್ಲೇ ವೈರಲ್ ಆಗುವುದಂತೂ ಖಂಡಿತ . ಉಳಿದಂತೆ ಕಥಾ ನಾಯಕನಾಗಿ ರೋಹಿತ್ ಶೆಟ್ಟಿ , ನಾಯಕಿಯಾಗಿ ಸ್ನೇಹ ಕುಂದರ್ ಮನ ಗೆಲ್ಲುತ್ತಾರೆ. ಇಬ್ಬರಿಗೂ ಕಲಾರಂಗದಲ್ಲಿ ಉತ್ತಮ ಭವಿಷ್ಯವಿದೆ . ಮೋಹನ್ ಕೊಪ್ಪಳ, ಯಾದವ ಮಣ್ಣಗುಡ್ಡೆ , ಶಿವಕುಮಾರ್ ರೈ , ಹರೀಶ್ ಪಣಂಬೂರು , ತಾರಾನಾಥ್ ಉರ್ವ , ಪ್ರದೀಪ್ ಆಳ್ವ , ನಿತೀಶ್ ಶೆಟ್ಟಿ , ನವೀನ್ ಶೆಟ್ಟಿ ಅಂಬ್ಲಮೊಗರು , ಅಶ್ವಿನ್ ರೈ , ಮಂಜು ಕಾರ್ಕಳ ಮುಂತಾದ ಪ್ರಬುದ್ಧ ರಂಗ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ದೃಶ್ಯ ಬದಲಾವಣೆಯಲ್ಲೂ ಕೈ ಜೋಡಿಸುತ್ತಾರೆ ಎಂದು ತಿಳಿದಾಗ ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ . ಇನ್ನು ಮುಖ್ಯವಾಗಿ ನಾಟಕದ ಯಶಸ್ಸಿನಲ್ಲಿ ಸೆಟ್ ವರ್ಕರ್ಸ್ ಮತ್ತು ಲೈಟ್ ಆಪರೇಟರ್ ರವರ ಪಾತ್ರ ಮಹತ್ವದ್ದಾಗಿದೆ ಅವರು ಕೂಡ ಅಭಿನಂದನಾರ್ಹರು.
ಇನ್ನು ನಾಟಕದ ತಾಂತ್ರಿಕ ವಿಚಾರವನ್ನು ಗಮನಿಸುವುದಾದರೆ ಹಿನ್ನೆಲೆ ಸಂಗೀತ ಸೂಪರ್ . ಕಾವ್ಯಶ್ರೀ ಅಜೆಕಾರ್ ರವರು ಶೀರ್ಷಿಕೆ ಗೀತೆ ನಾಟಕಕ್ಕೆ ಪ್ರಾರಂಭದಲ್ಲೇ ಒಂದು ಗತ್ತು ತರುತ್ತದೆ . ಡಾ. ವೈಷ್ಣವಿ ಕಿಣಿಯವರು ಹಾಡಿದ ” ಮೋಹಿನಿಯ ಹಾಡು ” ನಮ್ಮನ್ನು ಯಾವುದೋ ಯಕ್ಷ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ . ಸಾಹಿತ್ಯ ಸಂಭಾಷಣೆ ಅದ್ಭುತ .
ಕೊನೆಯ ಮಾತು . ಈ ” ಗರುಡ ಪಂಚೆಮಿ ” ನಾಟಕಕ್ಕೆ ಕಿಶೋರ್ ಡಿ ಶೆಟ್ಟಿಯವರು ಹಾಕಿದ ಬಂಡವಾಳ ಬರೋಬ್ಬರಿ ೧೫ ಲಕ್ಷ ರೂಪಾಯಿ ಎಂಬ ವಿಷಯ ತಿಳಿದಾಗ ನಾನವರಲ್ಲಿ ಕೇಳಿದೆ …. ” ನಮ್ಮಂತಹ ಬಡ ರಂಗ ಭೂಮಿಗೆ ಇಷ್ಟು ದೊಡ್ಡ ಬಂಡವಾಳ ಬೇಕಿತ್ತೆ .. ?? ” ಅದಕ್ಕೆ ಅವರು ಕೊಟ್ಟ ಉತ್ತರ .. ” ನಾನು ಇದುವರೆಗೂ ಹಣದ ಹಿಂದೆ ಹೋದವನಲ್ಲ . ಹಾಕಿದ ದುಡ್ಡು ಹಿಂದೆ ಬರುತ್ತದೆ ಎಂಬ ನಿರೀಕ್ಷೆಯೂ ನನಗಿಲ್ಲ . ಇಂತಹ ಅದ್ಭುತವಾದ ನಾಟಕಗಳು ನಮ್ಮ ದೇಶದಲ್ಲಿ ಮಾತ್ರವಲ್ಲ …. ಪ್ರಪಂಚದಲ್ಲಿ ಎಲ್ಲೇ ಇದ್ದರೂ ಅದನ್ನು ನಾನು ತುಳು ಭಾಷೆಗೆ ತರುತ್ತೇನೆ ಒಟ್ಟಿನಲ್ಲಿ ನನ್ನ ತುಳು ರಂಗಭೂಮಿ ನಿಂತ ನೀರಾಗಬಾರದು. ಅದು ಶ್ರೀಮಂತವಾಗಲೇಬೇಕು “.
ತುಳು ಪ್ರೇಕ್ಷಕರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಬಾರದ ನಾಟಕ ” ಗರುಡ ಪಂಚೆಮಿ ”
ಲಯನ್ ಶಾಂತಿ ಶೆಣೈ
ಮಂಗಳೂರು