ನೀರಿನ ರೇಷನ್ ಜನರಿಗೆ ಸಮಸ್ಯೆ ಜಿಲ್ಲಾಧಿಕಾರಿಗೆ ಸೂಚಿಸಿದ ಶಾಸಕ ವೇದವ್ಯಾಸ
ನೀರಿನ ರೇಷನ್ ಜನರಿಗೆ ಸಮಸ್ಯೆ ಜಿಲ್ಲಾಧಿಕಾರಿಗೆ ಸೂಚಿಸಿದ ಶಾಸಕ ವೇದವ್ಯಾಸ
April 21: ಮಂಗಳೂರು : ನಗರದಲ್ಲಿ ನೀರಿನ ರೇಷನ್ ಜನರಿಗೆ ಸಮಸ್ಯೆಯಾಗುತ್ತಿದ್ದು , ಈ ಬಗ್ಗೆ ಸಮರ್ಪಕ ಕ್ರಮಗಳನ್ನು ಜರಗಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ತುಂಬೆ ಡ್ಯಾಮ್‌ನಲ್ಲಿ ಮುಂದಿನ ದಿನಗಳಿಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹವಿಲ್ಲ ಎನ್ನುವ ಕಾರಣಕ್ಕೆ ನಗರದಲ್ಲಿ ನೀರಿನ ರೇಷನ್ ಕ್ರಮ ಕೈಗೊಳ್ಳಲಾಗಿದೆ. ಜನರಿಗೆ ಸಮರ್ಪಕ ರೀತಿಯಲ್ಲಿ ನೀರನ್ನು ಒದಗಿಸುವುದು ಪಾಲಿಕೆಯ ಕರ್ತವ್ಯ . ಹಾಗಾಗಿ ತುಂಬೆಯಲ್ಲಿ ನೀರಿನ ಸಂಗ್ರಹವಿಲ್ಲ ಎನ್ನುವ ಏಕೈಕ ಕಾರಣವನ್ನು ಮುಂದಿಟ್ಟು ಜನರಿಗೆ ತೊಂದರೆಯನ್ನು ನೀಡುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಇಂದು ಮಾತನಾಡಿದ್ದು , ಇಡೀ ಮಂಗಳೂರು ನಗರದಲ್ಲಿ ಏಲ್ಲಿಯೂ ನೀರಿನ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಂತೆ ಸೂಚಿಸಿರುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುಂಬೆ ಡ್ಯಾಮ್‌ನ ನೀರಿನ ಸಂಗ್ರಹದ ಗರಿಷ್ಠ ಮಟ್ಟ 6 ಮೀಟರ್‌ಗಳು. ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ ಸದ್ಯ 5.36 ಮೀಟರ್ ನೀರಿನ ಸಂಗ್ರಹವಿದೆ. ಅಂದರೆ ಸುಮಾರು 50 ದಿನಗಳಿಗೆ ಬೇಕಾಗುವಷ್ಟು ನೀರು ಲಭ್ಯವಿದೆ. ಅಲ್ಲದೆ ಎಎಂಆರ್ ಡ್ಯಾಮ್‌ನಲ್ಲೂ ಗರಿಷ್ಟ ಮಟ್ಟದಲ್ಲಿ ನೀರಿನ ಸಂಗ್ರಹವಿದೆ. ಹಾಗಾಗಿ ಪಾಲಿಕೆಯ ಅಧಿಕಾರಿಗಳು ಅದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಬಗ್ಗೆ ಚಿಂತಿಸಿಬೇಕು , ಅದನ್ನು ಬಿಟ್ಟು ಕೇವಲ ರೇಷನಿಂಗ್ ಹೆಸರಿನಲ್ಲಿ ಜನರಿಗೆ ತೊಂದರೆಯನ್ನು ನೀಡುವುದು ಸರಿಯಲ್ಲ ಎಂದು ಅವರು ವಿವರಿಸಿದ್ದಾರೆ.
ಎಪ್ರಿಲ್ 18ರಿಂದ ನೀರು ರೇಷನ್ ಕ್ರಮ ಜಾರಿಯಾಗಿದೆ. ಎರಡು ದಿನಕ್ಕೊಮ್ಮೆ ನೀರು ಎಂದು ಜನರಿಗೆ ತಿಳಿಸಿದ್ದರೂ , ಇಂದು ( ಶನಿವಾರ ) ನಗರದ ಬಹುಭಾಗಕ್ಕೆ ನೀರು ತಲುಪಿಲ್ಲ. ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯಿಂದ ಕ್ರಮ ಜರಗಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.
ನಗರದಲ್ಲಿ ಈ ಹಿಂದೆ ನೀರಿನ ಅಭಾವ ಸೃಷ್ಟಿಯಾದ ಸಂದರ್ಭದಲ್ಲಿ ಟ್ಯಾಂಕರ್‌ಗಳು ಮೂಲಕ ಖಾಸಗಿ ಬಾವಿಗಳಿಂದ ನೀರನ್ನು ಪಡೆದು ಅಗತ್ಯವಿರುವ ಕಡೆಗಳಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳು ಈ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಿ , ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ನೀರು ಪೂರೈಸುವ ಕ್ರಮ ಜರಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆ ಮತದಾನ ಮುಗಿದರೂ ನೀತಿ ಸಂಹಿತೆಜಾರಿಯಲ್ಲಿದ್ದು , ಜೊತೆಯಲ್ಲಿ ಪಾಲಿಕೆಯಲ್ಲೂ ಅಡಳಿತಾಧಿಕಾರಿಗಳ ಅಡಳಿತವಿರುವ ಕಾರಣ ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳ ಪಾತ್ರವೇ ಮಹತ್ವದ್ದು. ನಗರದ ಯಾವುದೇ ಭಾಗದಲ್ಲೂ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವುದು ಬಹು ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಸಹಾಯವಾಣಿ ಕೇಂದ್ರ
ಮಳೆಗಾಲ ಆರಂಭಕ್ಕೆ ಇನ್ನೂ ಕನಿಷ್ಠ 40 ದಿನಗಳಿದ್ದು ,ಅಲ್ಲಿಯವರೆಗೆ ನೀರಿನ ಸಮಸ್ಯೆ ಬಗೆಹರಿಸಲು , ಜನರ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ಸಹಾಯವಾಣಿ ಕೇಂದ್ರವೊಂದನ್ನು ಆರಂಭಿಸುವ ಅಗತ್ಯವಿದೆ ಎಂದು ಅವರು ಸೂಚಿಸಿದ್ದಾರೆ.
ಶಾಸಕರ ಕಚೇರಿಯಲ್ಲೂ ಸಹಾಯವಾಣಿ
ನೀರಿನ ಸಮಸ್ಯೆ ಸ್ಪಂದನೆಗಾಗಿ ಶಾಸಕರ ಕಚೇರಿಯಲ್ಲಿ ಪ್ರತ್ಯೇಕ ಸಹಾಯವಾಣಿ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲಿ ಬಂದ ಎಲ್ಲ ದೂರುಗಳನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಸಕಾಲದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜನರ ಸಹಕಾರ ಅಗತ್ಯ
ನಗರದ ಜನರು ಕೂಡಾ ಅನಾವಶ್ಯಕವಾಗಿ ನೀರನ್ನು ಪೋಲು ಮಾಡುವುದನ್ನು ನಿಲ್ಲಿಸಿ , ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಕೆಲವೊಂದು ಕಡೆಗಳಲ್ಲಿ ವಾಹನಗಳನ್ನು ತೊಳೆಯಲು , ಹೂದೋಟಗಳಿಗೆ , ಮನೆ ಮುಂಭಾಗದಲ್ಲಿ ಸಿಂಪಡಿಸಿ ನೀರನ್ನು ಪೋಲು ಮಾಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸಿದರೆ ನಗರದ ಎಲ್ಲ ಜನರಿಗೂ ಅವರ ಪ್ರಯೋಜನ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ.