ಪಚ್ಚನಾಡಿಗೆ ಸಂಸದ ಕಟೀಲ್, ಶಾಸಕ ಕಾಮತ್, ಭರತ್ ಶೆಟ್ಟಿ ಭೇಟಿ

ಪಚ್ಚನಾಡಿಗೆ ಸಂಸದ ಕಟೀಲ್, ಶಾಸಕ ಕಾಮತ್, ಭರತ್ ಶೆಟ್ಟಿ ಭೇಟಿ

ಮಂಗಳೂರಿನ ಹೊರವಲಯದ ಪಚ್ಚನಾಡಿಯಲ್ಲಿರುವ ಡಂಪಿಂಗ್ ಯಾರ್ಡ್ ನಿಂದ ತ್ಯಾಜ್ಯದ ರಾಶಿ ಹರಿದು ಸನಿಹದ ಮಂದಾರ ಜನವಸತಿ ಇರುವ ಪ್ರದೇಶದ ಜನ ಅನುಭವಿಸುತ್ತಿರುವ ತೊಂದರೆಯನ್ನು ಪರಿಶೀಲಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ|ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದರು.

ಈ ಬಗ್ಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಇಬ್ಬರೂ ಶಾಸಕರೊಂದಿಗೆ ತಾವು ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ತಜ್ಞರ ತಂಡವನ್ನು ಶೀಘ್ರದಲ್ಲಿ ಇಲ್ಲಿ ಕಳುಹಿಸಿಕೊಡಲಿದ್ದು, ತಜ್ಞರು ನೀಡುವ ವರದಿಯ ಆಧಾರದ ಮೇಲೆ ಶಾಶ್ವತ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿ ಸೇರಿದ ನೀರು ಹರಿದು ಹೋಗಿ ಆಸುಪಾಸಿನ ಬಾವಿಗಳನ್ನು ಸೇರುತ್ತಿವೆ. ಕುಡಿಯುವ ನೀರಿನ ಯೋಜನೆಗಳು ಹಾಳಾಗುತ್ತಿವೆ. ಅವೈಜ್ಞಾನಿಕವಾಗಿ ಈ ಡಂಪಿಂಗ್ ಯಾರ್ಡ್ ಗೆ ಕಳೆದ ಆರೇಳು ವರ್ಷಗಳಿಂದ ಪಾಲಿಕೆಯಲ್ಲಿ ಆಡಳಿತ ಮಾಡುತ್ತಿದ್ದ ಸರಕಾರ, ಹಿಂದಿನ ರಾಜ್ಯ ಸರಕಾರ, ಆಗಿನ ಉಸ್ತುವಾರಿ ಸಚಿವರುಗಳು, ಆಗಿನ ಮೇಯರುಗಳೇ ನೇರ ಕಾರಣ. ಮಾನವ ನಿರ್ಮಿತ ಅವ್ಯವಸ್ಥೆಯಿಂದಲೇ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಬಿಜೆಪಿ ಮುಖಂಡರಾದ ದಿವಾಕರ್, ವಸಂತ ಜೆ ಪೂಜಾರಿ, ಕಿರಣ್ ಕುಮಾರ್ ಕೋಡಿಕಲ್, ಪ್ರಶಾಂತ್ ಪೈ, ಅಜಯ್ ಕುಲಶೇಖರ್, ರವೀಂದ್ರ ನಾಯಕ್, ಸಂದೀಪ್ ಪಚ್ಚನಾಡಿ, ರಾಮ್ ಅಮೀನ್ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

Latest News