ಪ್ರಾಪರ್ಟಿ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಸಿಎಂ ಬಿಎಸ್ ವೈ ಅವರೊಂದಿಗೆ ಶಾಸಕ ಕಾಮತ್ ಚರ್ಚೆ

ಪ್ರಾಪರ್ಟಿ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಸಿಎಂ ಬಿಎಸ್ ವೈ ಅವರೊಂದಿಗೆ ಶಾಸಕ ಕಾಮತ್ ಚರ್ಚೆ

ಮಂಗಳೂರಿನಲ್ಲಿ ಕಡ್ಡಾಯವಾಗಿ ಜಾರಿಯಲ್ಲಿರುವ ಪ್ರಾಪರ್ಟಿ ಕಾರ್ಡ್ ಮಾಡಿಸಲು ನಾಗರಿಕರಿಗೆ ಅನೇಕ ತೊಂದರೆಗಳು ಆಗುತ್ತಿರುವುದರಿಂದ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಿಂದ ಸೂಕ್ತ ಸೂಚನೆಗಳನ್ನು ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಲ್ಲಿ ಮನವಿ ಮಾಡಿ ಪರಿಹಾರೋಪಾಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಂಗಳೂರು ಸಬ್ ರಿಜಿಸ್ಟಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000 ಕ್ಕೂ ಅಧಿಕ ಆಸ್ತಿಗಳಿದ್ದು, ಈಗ ದೊರಕಿರುವ ಮಾಹಿತಿ ಪ್ರಕಾರ 50 ಸಾವಿರಕ್ಕಿಂತಲೂ ಕಡಿಮೆ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ ಎಂದು ಸಿಎಂ ಗಮನಕ್ಕೆ ತಂದ ಶಾಸಕ ಕಾಮತ್ ಹಿಂದಿನ ಸರಕಾರ ಮಂಗಳೂರಿನಲ್ಲಿ ಇದನ್ನು ಕಡ್ಡಾಯಗೊಳಿಸಿದಾಗ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಯನ್ನು ಅವಲೋಕಿಸದೇ ಕಾರ್ಯಗತಗೊಳಿಸಿದ್ದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮೂಲಗೇಣಿ ಮತ್ತು ಮೂಲಿಹಕ್ಕಿನ ಪರಭಾರೆ, ಸ್ಥಳದ ಅವಿಭಾಜ್ಯ ಅಂಶದ ಹಕ್ಕನ್ನು ಪರಭಾರೆ ಮಾಡುವ ಬಗ್ಗೆ , ಅಪಾರ್ಟ್ ಮೆಂಟ್ ನಲ್ಲಿ ರಿಸರ್ವ್ ಜಾಗದ ಒಡೆತನದ ಬಗ್ಗೆ, ವೈಯಕ್ತಿಕ ಮನೆಗಳಿಗೆ ಹಾಗೂ ವಿಲ್ಲಾಗಳಿಗೆ ಪ್ರಾಪರ್ಟಿ ಕಾರ್ಡ್ ನೀಡುವ ತಂತ್ರಜ್ಣಾನ ಸರಿ ಇಲ್ಲದಿರುವಿಕೆ, ಸಾಫ್ಟವೇರ್ ಸಮಸ್ಯೆ, ಕಚೇರಿ ಅವ್ಯವಸ್ಥೆ, ಸರ್ವೆಯರ್ ಕೊರತೆ ಹೀಗೆ ಅನೇಕ ತೊಂದರೆಗಳು ಇರುವುದರಿಂದ ಇದಕ್ಕೆಲ್ಲ ಸೂಕ್ತ ಪರಿಹಾರ ಸಿಗದೇ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ತಮ್ಮ ಕ್ಷೇತ್ರದ ಜನರು ತೊಂದರೆಗೆ ಸಿಲುಕಿದ್ದಾರೆ. ಅದಕ್ಕೆ ಪರಿಹಾರ ಸೂಚಿಸಿ ನಂತರ ಕಡ್ಡಾಯಗೊಳಿಸಬೇಕು ಎಂದು ಶಾಸಕ ಕಾಮತ್ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚೆ ನಡೆಸಿದ್ದಾರೆ.

Latest News